ವೀರೇಶಲಿಂಗಮ್ ಕಂದುಕೂರಿ
	1848-1919. ತೆಲುಗಿನ ಆಧುನಿಕ ಸಾಹಿತ್ಯದ ನೇತಾರ, ಸಮಾಜ ಸೇವಕ, ಪ್ರಗತಿಪರ ಚಿಂತಕ. 1848 ಎಪ್ರಿಲ್ 16ರಂದು ರಾಜಮಹೇಂದಿಯಲ್ಲಿ ಜನಿಸಿದರು. ತಂದೆ ಸುಬ್ಬ ರಾಯರು, ತಾಯಿ ಪುನ್ನಮ್ಮ. ಶಾಲಾ ವಿದ್ಯಾಭ್ಯಾಸದ ಸಮಯದಲ್ಲಿ ಪ್ರಥಮರಾಗಿ ಎಲ್ಲ ಬಹುಮಾನಗಳನ್ನೂ ಹಲವು ವಿದ್ಯಾರ್ಥಿ ವೇತನಗಳನ್ನೂ ಗಳಿಸಿಕೊಂಡರು. 1868ರಲ್ಲಿ ಮೆಟ್ರಿಕ್ಯುಲೇಷನ್ ಪರೀಕ್ಷೆ ಬರೆದು ಫೇಲಾಗಿ ಅನಂತರ ತೇರ್ಗಡೆಯಾದರು (1870). 1872ರಲ್ಲಿ ಕೋರಂಗಿಯ ಇಂಗ್ಲಿಷ್ ಶಾಲೆಯ ಮುಖ್ಯೋಪಾಧ್ಯಾಯರಾದರು. ಆದರ್ಶ ಉಪಾಧ್ಯಾಯರೆಂದು ಹೆಸರುಗಳಿಸಿದರು. ಬಳಿಕ ಧವಳೇಶ್ವರದ ಆಂಗ್ಲೋವರ್ನಾಕ್ಯುಲರ್ ಶಾಲೆಯ ಆಡಳಿತಾಧಿಕಾರಿಯಾದರು (1874). ಅನಂತರ ರಾಜಮಹೇಂದ್ರವರದ ಆಟ್ರ್ಸ್ ಕಾಲೇಜಿನಲ್ಲಿ ತೆಲುಗು ಪಂಡಿತರಾಗಿ ಕೆಲಸಕ್ಕೆ ಸೇರಿದರು. ಆಮೇಲೆ ಸಾರ್ವಜನಿಕ ಸೇವೆ ಮತ್ತು ಸಾಹಿತ್ಯ ಸೇವೆಗೆ ತಮ್ಮ ಜೀವನವನ್ನು ಪೂರ್ತಿಯಾಗಿ ಅರ್ಪಿಸಿಕೊಂಡರು. 

	ಸಮಾಜ ಸುಧಾರಕರಾಗಿ ಇವರು ಮಾಡಿದ ಸೇವೆ ಹಲವರಿಗೆ ಸ್ಫೂರ್ತಿ ನೀಡಿತು. ಕೇಶವಚಂದ್ರ ಸೇನ್, ರಾಜಾರಾಮ ಮೋಹನರಾಯ್, ದೇವೇಂದ್ರನಾಥ ಮತ್ತಿತರರ ವಿಚಾರಗಳಿಂದ ಪ್ರಭಾವಿತರಾದ ಇವರು  ಸಮಾಜ ಸುಧಾರಣೆ ತಮ್ಮ ಜೀವನದ ಮುಖ್ಯ ಧ್ಯೇಯೋದ್ದೇಶವೆಂದು ಭಾವಿಸಿದರು. ಮೂಢನಂಬಿಕೆ ಗಳ ವಿರುದ್ಧ ಅವಿಶ್ರಾಂತ ಹೋರಾಟ ನಡೆಸಿದರು. ಇವರನ್ನು ಅಭಿಮಾನಿ ಗಳು ದಕ್ಷಿಣದ ಈಶ್ವರಚಂದ್ರ ವಿದ್ಯಾಸಾಗರ ಎಂದು ಕೀರ್ತಿಸಿದರು. ಸ್ತ್ರೀವಿದ್ಯೆ, ವಿಧವಾ ವಿವಾಹ, ಅಂಧ ವಿಶ್ವಾಸಗಳಿಗೆ ವಿರೋಧ ಮುಂತಾದವು ಇವರ ಕ್ರಿಯಾಶೀಲತೆಯ ಭಾಗವಾದುವು. 

	ಇವರು ಮದುವೆಯಾದದ್ದು (1861) ನಿರಕ್ಷರಕುಕ್ಷಿಯನ್ನು. ಅನಂತರ ಆಕೆಗೆ ಶಿಕ್ಷಣ ನೀಡಿ, ಆಕೆ ತಮ್ಮ ಎಲ್ಲ ಚಟುವಟಿಕೆಗಳಿಗೆ ಸಹಾಯ ಕಳಾಗುವಂತೆ ಮಾಡಿದರು. ಅನೇಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದರು. ಅವುಗಳಲ್ಲಿ ವಯಸ್ಕ ಮಹಿಳೆಯರಿಗೆ ಹಗಲು ಶಾಲೆಗಳೂ ಇದ್ದುವು. 

	1878ರಲ್ಲಿ ಸಂಘ ಸಂಸ್ಕಾರ ಸಮಾಜ (ಸಮಾಜ ಸುಧಾರಣಾ ಸಂಸ್ಥೆ) ಸ್ಥಾಪಿಸಿದರು. ವಿಧವಾ ವಿವಾಹದ ಬಗ್ಗೆ ಇವರು ವ್ಯಕ್ತಮಾಡಿದ ಅಭಿಪ್ರಾ ಯಗಳಿಂದ ಆಂಧ್ರದ ಸಂಪ್ರದಾಯನಿಷ್ಠರ ವಿರೋಧ ಕಟ್ಟಿಕೊಂಡರು. ಎರಡು ವರ್ಷಗಳ ಸತತ ಚಳವಳಿಯಿಂದ ಅನೇಕ ತರುಣರು ವಿಧವಾ ವಿವಾಹಕ್ಕೆ ಮುಂದಾದರು. ಇವರು ತಮ್ಮ ಕಾರ್ಯಕ್ಷೇತ್ರವನ್ನು ದಕ್ಷಿಣ ಭಾರತದ ಇತರ ಪ್ರದೇಶಗಳಿಗೂ ವಿಸ್ತರಿಸಿದ್ದರು. ಬೆಂಗಳೂರಿನಲ್ಲೂ ವಿಧವಾವಿವಾಹಗಳನ್ನು ನಡೆಸಿದರು. ಇವರ ಅದಮ್ಯ ಕಾರ್ಯಶೀಲತೆ ಯನ್ನು ಮೆಚ್ಚಿದ ತಮಿಳುಕವಿ ಸುಬ್ರಹ್ಮಣ್ಯ ಭಾರತಿಯವರು ಇವರನ್ನೇ ಕುರಿತು ನಾಯಕನನ್ನಾಗಿ ಮಾಡಿ ಚಂದ್ರಕೈಯಿನ್ ಕತೈ ಎಂಬ ಕಾದಂಬರಿ ಬರೆದರು. 

	ಇವರು ಪತ್ರಿಕೋದ್ಯಮಿಯೂ ಆಗಿದ್ದರು. ಇವರು ಸ್ಥಾಪಿಸಿದ (1874) ವಿವೇಕವರ್ಧಿನಿ ಎಂಬ ಮಾಸಪತ್ರಿಕೆ ಹೊಸ ಸಾಮಾಜಿಕ ವ್ಯವಸ್ಥೆಯನ್ನು ತರುವ ಪ್ರಯತ್ನ ಮಾಡಿತು. 1875ರಲ್ಲಿ ಸ್ವಂತ ಮುದ್ರಣಾಲಯ ಸ್ಥಾಪಿಸಿದರು. ಹಾಸ್ಯಸಂಜೀವಿನಿ ಎಂಬ ಪತ್ರಿಕೆಯ ಮೂಲಕ ಇವರು ಸಾಮಾಜಿಕ ಸಮಸ್ಯೆಗಳನ್ನು ಹಾಸ್ಯಾತ್ಮಕವಾಗಿ ಟೀಕಿಸುವ ಪ್ರಯತ್ನ ಮಾಡಿದರು. ಇವರು ಪ್ರಾರಂಭಿಸಿದ ಸತೀ ಹಿತಬೋಧಿನಿ ಎಂಬ ಮಾಸಪತ್ರಿಕೆ ಹೊಸ ಇತಿಹಾಸ ಸೃಷ್ಟಿಸಿತು. ಈ ಪತ್ರಿಕೆಯ ಅಂಕಣದಲ್ಲಿ ಸತ್ಯವತಿ, ಚಂದ್ರಮತಿಯರ ಕಥೆಗಳನ್ನು ಧಾರಾವಾಹಿಯಾಗಿ ಪ್ರಕಟಿಸಿದರು. ದೇಶವಿದೇಶಗಳ ಸ್ತ್ರೀಯರ ಜೀವನ ಚರಿತ್ರೆ, ಆರೋಗ್ಯ ವಿಚಾರ, ನೀತಿ  ನಿರೂಪಣೆ ಮುಂತಾದ ವಿಚಾರಗಳೂ  ಪ್ರಕಟವಾಗುತ್ತಿದ್ದುವು. ಇವರು ಮಹಿಳೆಯರಿಗಾಗಿ ಸತ್ಯಸಂವರ್ಧಿನಿ, ಸತ್ಯವಾದಿನಿ ಎಂಬ ನಿಯತ ಕಾಲಿಕಗಳನ್ನೂ ಹೊರತಂದರು. 

	ಸಾಹಿತ್ಯ ಕ್ಷೇತ್ರಕ್ಕೆ ಇವರ ಸೇವೆ ಅನನ್ಯವಾದುದು. ತೆಲುಗಿನ ಆಧುನಿಕ ಸಾಹಿತ್ಯಕ್ಕೆ ಅಪೂರ್ವ ಪ್ರಕಾರಗಳನ್ನೂ ನೀಡಿದರು. ಪ್ರಾರಂಭಕಾಲದಲ್ಲಿ ದ್ವಿಸಂಧಾನ ಹಾಗೂ ಅಚ್ಚತೆಲುಗು ಕಾವ್ಯಗಳನ್ನು ಬರೆಯುತ್ತಿದ್ದ ಇವರು ಅತಿ ಶೀಘ್ರದಲ್ಲೇ ಸಾಮಾನ್ಯರಿಗಾಗಿ ಸಾಹಿತ್ಯ ಸೃಷ್ಟಿಯಾಗಬೇಕೆಂಬುದನ್ನೂ ಮನಗಂಡರು. ಇವರ ಸರಸ್ವತೀ ನಾರದ ಸಂವಾದ (1877) ಸಾಂಪ್ರದಾ ಯಿಕ ಕಾವ್ಯಸರಸ್ವತಿಯ ಆಲಂಕಾರಿಕ ಭಾರವನ್ನು ವ್ಯಂಗ್ಯವಾಗಿ ನಿರೂಪಿ ಸಿತು. ಆಧುನಿಕ ಕಾಲದ ಸಾಹಿತ್ಯ ಮಾಧ್ಯಮವಾಗಿ ಗದ್ಯವೇ ಬಳಕೆಯಾಗು ವುದು ಸೂಕ್ತವೆಂದು ಭಾವಿಸಿದ ಇವರು ಅನಂತರ ತಮ್ಮ ಹೆಚ್ಚಿನ ಬರೆವಣಿಗೆಯನ್ನು ಗದ್ಯದಲ್ಲೇ ಮುಂದುವರಿಸಿ ಗದ್ಯ ತಿಕ್ಕನ ಎಂಬ ಬಿರುದಿಗೆ ಪಾತ್ರರಾದರು. 

	ವಿವೇಕವರ್ಧಿನಿ ಪತ್ರಿಕೆಯಲ್ಲಿ ಇವರ ಮೊದಲ ಕಾದಂಬರಿ ರಾಜ ಶೇಖರ ಚರಿತ್ರ ಧಾರಾವಾಹಿಯಾಗಿ ಪ್ರಕಟವಾಯಿತು (1878). ಇದರಿಂದ ಇವರು ತೆಲುಗಿನ ಕಾದಂಬರಿ ಪ್ರಕಾರದ ಪಿತಾಮಹ ಎನಿಸಿಕೊಂಡರು. ಸತ್ಯರಾಜಾಪೂರ್ವದೇಶಯಾತ್ರೆ, ಸತ್ಯವತೀ ಚರಿತ್ರೆ ಇವರ ಇತರ ಕಾದಂಬರಿಗಳು. ಇವರು ಕಾದಂಬರಿಗಳನ್ನು ಬರೆದದ್ದಲ್ಲದೆ ಕಾದಂಬರಿ ರಚನಾ ಸ್ಪರ್ಧೆಗಳನ್ನೂ ಏರ್ಪಡಿಸಿ ಈ ಪ್ರಕಾರ ತೆಲುಗಿನಲ್ಲಿ ಬೆಳೆಯಲು ಸ್ಫೂರ್ತಿ ನೀಡಿದರು. 

	ಸಮಾಜ ಸುಧಾರಣೆಯ ಉದ್ದೇಶದಿಂದಲೇ ಇವರು ಹಲವು ಪ್ರಹಸನ ಗಳನ್ನು ಬರೆದರು. ಬ್ರಾಹ್ಮವಿವಾಹವೆಂಬ ಇವರ ನಾಟಕ (1876) ಹಾಸ್ಯ ಸಂಜೀವಿನಿ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿತು. ನಾಟಕಗಳಲ್ಲಿ ಆಡುನುಡಿಯನ್ನು ಸಶಕ್ತವಾಗಿ ಬಳಸಿದರು. ಇವರ ಪ್ರಹ್ಲಾದ, ದಕ್ಷಿಣ ಗೋಗ್ರಹಣ ನಾಟಕಗಳು ಅನಂತರದ ತೆಲುಗು ಪೌರಾಣಿಕ ನಾಟಕಗಳ ರಚನೆಗೆ ಮಾದರಿಯಾದುವು. ಹರಿಶ್ಚಂದ್ರೋಪಾ ಖ್ಯಾನ ಇವರ ಅತ್ಯಂತ ಜನಪ್ರಿಯ ನಾಟಕ. ಷೇಕ್‍ಸ್ಪಿಯರನ ಕಾಮೆಡಿ ಆಫ್ ಎರರ್ಸ್, ಕಿಂಗ್‍ಲಿಯರ್, ಮರ್ಚಂಟ್ ಆಫ್ ವೆನಿಸ್, ಶೆರಿಡನ್‍ನ ದಿ ಹುಯೆನ್ನ, ದಿ ರೈವಲ್ಸ್ ನಾಟಕಗಳನ್ನೂ ಇವರು ಅನುವಾದಿಸಿದರು. ಕಾಳಿದಾಸನ ಶಾಕುಂತಲಾ, ಮಾಳವಿಕಾಗ್ನಿಮಿತ್ರಮ್, ಕೃಷ್ಣಮಿಶ್ರನ ಪ್ರಬೋಧಚಂದ್ರೋದಯ, ಹರ್ಷನ ರತ್ನಾವಳಿ ಮುಂತಾದ ಅನೇಕ ನಾಟಕಗಳನ್ನು ತೆಲುಗಿಗೆ ತಂದರು. ಜೊತೆಗೆ ನಾಟಕಗಳನ್ನೂ ನಿರ್ದೇಶಿಸಿದರು.

	ಇವರ ಬಹುಮುಖ ಸಾಹಿತ್ಯಸೇವೆಯಲ್ಲಿ ಕವಿಚರಿತ್ರೆಯ ರಚನೆಯೂ ಸೇರಿದೆ. ಆಂಧ್ರ ಕವುಲ ಚರಿತ್ರಮು ಮೂರು ಸಂಪುಟಗಳಲ್ಲಿ ಪ್ರಕಟಗೊಂಡಿದೆ (1899). ಇವರು ಅನೇಕ ಕೃತಿಗಳನ್ನು ಶಾಸ್ತ್ರೀಯವಾಗಿ ಸಂಪಾದಿಸಿಕೊಟ್ಟಿದ್ದಾರೆ. 	 ಯೇಸುಕ್ರಿಸ್ತ, ರಾಜಾರಾಮಮೋಹನರಾಯ್, ರಾಣಿ ವಿಕ್ಟೋರಿಯ ಮೊದಲಾದವರ ಜೀವನ ಚರಿತ್ರೆಗಳನ್ನು ರಚಿಸಿದ್ದಾರೆ. ತಮ್ಮ ಜೀವನದ ರೋಮಾಂಚಕಾರಿ ಅನುಭವಗಳನ್ನೊಳಗೊಂಡ ಆತ್ಮಚರಿತ್ರೆಯನ್ನೂ ಇವರು ಬರೆದರು (1887). ಇದೊಂದು ಅದ್ಭುತ ಕಥನ.

	ತೆಲುಗು ಸಾಹಿತ್ಯಕ್ಕೆ ವೈವಿಧ್ಯವನ್ನೂ ವಿಜ್ಞಾನ ಭಾಷೆಗೆ ನುಡಿಗಟ್ಟುಗಳ ನ್ನೂ ಒದಗಿಸುವ ಸಲುವಾಗಿ ಶರೀರಶಾಸ್ತ್ರ, ಖಗೋಳಶಾಸ್ತ್ರ, ಶಿಶುಸಾಹಿತ್ಯ, ನೀತಿಕಥಾಮಂಜರಿ, ಸಂಗ್ರಹವ್ಯಾಕರಣ, ಅಲಂಕಾರ ಸಂಗ್ರಹ ಮುಂತಾದ ಕೃತಿಗಳನ್ನು ರಚಿಸಿದರು. ತೆಲುಗು ಸಾಹಿತ್ಯದ ಅನೇಕ ಪ್ರಥಮಗಳಿಗೆ ಭಾಜನರಾದ ಇವರು 1919 ಮೇ 27ರಂದು ಮದರಾಸಿನಲ್ಲಿ ನಿಧನರಾದರು.	
											(ಆರ್.ವಿ.ಎಸ್.ಎಸ್.)

   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ